ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ!
ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ
ಕನ್ನಡದ ನೆಲದ ಕಲ್ಲೆಮಗೆ ಶಾಲಗ್ರಾಮ ಶಿಲೆ!ಕನ್ನಡಂ ದೈವಮೈ!
ಕನ್ನಡದ ಶಬ್ದಮೆಮಗೋಂಕಾರಮೀಯೆನ್ನ
ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ-
ಮಿನ್ನಾವುದೈ ಪೆರತು ಕನ್ನಡದ ಸೇವೆಯಿಂದಧಿಕಮೀ ಜಗದೊಳಗೆ?
ಅಂತ ಸಾಲಿ ರಾಮಚಂದ್ರರಾಯರು ಕನ್ನಡ ನುಡಿಯ ಬಗ್ಗೆ ಕನ್ನಡಿಗನಿಗಿರುವ ಕನ್ನಡ ಬಗ್ಗೆ ಗರ್ವವನ್ನು ಅತ್ಯದ್ಭುತವಾಗಿ ವಿವರಿಸಿದ್ದಾರೆ. ನೂರಾರು ಸಂಸ್ಥಾನಗಳಾಗಿ ಹಂಚಿ ಹೋಗಿದ್ದ ಭಾರತವನ್ನು ಸ್ವಾತಂತ್ರ್ಯ ನಂತರ ಭಾಷಾವಾರು ವಿಂಗಡನೆ ಆಧಾರದ ಮೇಲೆ, ವಿವಿಧ ರಾಜ್ಯಗಳ ರಚನೆ ಮಾಡಲಾಯಿತು. ಅದರಂತೆ ಮೈಸೂರು ಸಂಸ್ಥಾನ ಮತ್ತು ದಕ್ಷಿಣದಲ್ಲಿದ್ದ ಹೈದರಾಬಾದ್ ಪ್ರಾಂತ್ಯ, ಮುಂಬೈ ಪ್ರಾಂತ್ಯ, ಮದರಾಸು ಪ್ರಾಂತ್ಯಗಳ ಕನ್ನಡ ಮಾತನಾಡುವ ಪ್ರದೇಶಗಳನ್ನು ಸೇರಿಸಿ ಮೈಸೂರು ರಾಜ್ಯವೆಂದು ೧೯೫೬ರ ನವೆಂಬರ್ ೧ರಂದು ನೂತನ ರಾಜ್ಯದ ಜನನವಾಯಿತು. ೧೯೭೩ ರಲ್ಲಿ ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ಅಂದಿನ ಮುಖ್ಯಮಂತ್ರಿ ಶ್ರೀ ಯುತ ದೇವರಾಜ ಅರಸ್ ಅವರ ಸರ್ಕಾರ ಮರುನಾಮಕರಣ ಮಾಡಿತು. ಹೀಗೆ ನಾವೆಲ್ಲರೂ ಪ್ರತಿ ವರ್ಷ ರಾಜ್ಯೋತ್ಸವ ವನ್ನು ಆಚರಿಸುತ್ತೆವಸ್ಟೆ ಆದ್ರೆ ನಾವುಗಳು ನಮ್ಮ ಕನ್ನಡ ಭಾಷೆಯ ಬಗ್ಗೆ ಹೆಮ್ಮೆ, ಅಭಿಮಾನ ಪ್ರೀತಿಯನ್ನು ನಾವುಗಳು ರೂಡಿಸಿಕೊಂಡಿಲ್ಲ.
ಕನ್ನಡವೊಂದು ಭಾಷೆ ಮಾತ್ರವೇ ಅಲ್ಲ, ಅದೊಂದು ಸಂಸ್ಕೃತಿ, ಅದೊಂದು ದೇಶ, ಅದೊಂದು ಸಂಸ್ಕಾರ, ಜೀವನಶೈಲಿ, ಅದೊಂದು ಸಂಪ್ರದಾಯ, ಪರಂಪರೆಯೂ ಹೌದು. ಈ ಹೆಮ್ಮೆಯ, ನಲುಮೆಯ, ಒಲುಮೆಯ ಚಿಲುಮೆಯೇ ಆಗಿರುವ ಚೆನ್ನುಡಿಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಅದೆಂಥದೋ ಹೇಳಿಕೊಳ್ಳಲಾರದ ಆತಂಕವೊಂದು ಕನ್ನಡವನ್ನು ಕಾಡುತಿದೆ. ರಾಜಧಾನಿ ಬೆಂಗಳೂರು ಸಹಿತವಾಗಿ ಹಲವಾರು ಪ್ರಮುಖ ಪಟ್ಟಣಗಳು ಬಹುಸಂಸ್ಕೃತಿ ನಗರವಾಗಿ ರೂಪುಗೊಳ್ಳುತ್ತಿವೆ ಇದಕ್ಕೆ ಕಾರಣ ಉದಾರೀಕರಣ, ಜಾಗತೀಕರಣದ ಭರಾಟೆ. ಜಗತ್ತಿನ ನಾಲ್ಕಾರು ಕೋಟಿ ಜನ ಮಾತನಾಡುವ ಭಾಷೆ ಕನ್ನಡ; ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆಗಳ ಸಾಲಿನಲ್ಲಿ 27ನೇ ಸ್ಥಾನದಲ್ಲಿದೆ ಕನ್ನಡ; ಪಂಚದ್ರಾವಿಡ ಭಾಷೆಗಳಲ್ಲೊಂದು ಕನ್ನಡ; ಭಾರತದ ಅಧಿಕೃತ 22 ಭಾಷೆಗಳಲ್ಲೊಂದು ಕನ್ನಡ; ಕರ್ನಾಟಕದ ಆಡಳಿತ ಭಾಷೆ ಕನ್ನಡ; ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತ್ಯ ಕನ್ನಡ; ತುಳು, ಕೊಂಕಣಿ ಮತ್ತು ಕೊಡವ ಭಾಷೆಗಳನ್ನು ಬರೆಯಲು ಉಪಯೋಗಿಸುವ ಲಿಪಿ ಕನ್ನಡ. ಇಷ್ಟೊಂದು ಹೆಗ್ಗಳಿಕೆ-ಬಳಕೆಯಿರುವ ಕನ್ನಡವೇಕೆ ಆಗಾಗ ಅವಮಾನಕ್ಕೊಳಗಾಗುತ್ತಿದೆ? ಗಡಿ ಜಗಳವೇಕೆ ವರ್ಷಕ್ಕೊಮ್ಮೆ ಮುಗಿಲು ಮುಟ್ಟುತ್ತದೆ? ಶಾಸ್ತ್ರೀಯ ಸ್ಥಾನ-ಮಾನಕ್ಕೇಕೆ ಇಷ್ಟು ವರ್ಷಗಳ ಕಾಲ ಕಾಯಬೇಕಾಯಿತು?. ಇವೆಲ್ಲ ಪ್ರಶ್ನೆಗಳಿಗೆ ಕಾರಣ ಕನ್ನಡಿಗನ ಬೇಜವಾಬ್ದಾರಿತನ ಅಂತ ನಾನು ಇಲ್ಲಿ ನಮುದಿಸುವದಿಲ್ಲ, ಪರಭಾಷಾ ಪ್ರೀತಿ ಹಾವಳಿ ಮತ್ತು ಪರಭಾಷಿಕರ ಸಂಖೆ ಹೆಚ್ಚಗುತೀರುವದೆ ಇದಕ್ಕೆ ಮೂಲ ಕಾರಣವಿರಲೂಬಹುದು.
ಕನ್ನಡಿಗರು ಸರ್ಕಾರಿ ಉದ್ಯೋಗ ದಕ್ಕಿಸಿಕೊಳ್ಳಲು ಹತ್ತಾರು ವರ್ಷ ಕಾಯುತ್ತಾ ಕುಳಿತರೆ, ಇಂಗ್ಲೀಷ್ ಕಲಿತಿರುವ ಪರಭಾಷಿಕರಿಗೆ ನಮ್ಮ ರಾಜ್ಯದಲ್ಲಿನ ಐಟಿ, ಬಿಟಿ, ಹೊರಗುತ್ತಿಗೆ ಮುಂತಾದ ಖಾಸಗಿ ಉದ್ಯೋಗಗಳು ಸುಲಭವಾಗಿ ದಕ್ಕುತ್ತಿವೆ. ಎಲ್ಲೋ ಬೆರಳಿಣಿಕೆಯಷ್ಟು ಕನ್ನಡಿಗರು ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ಕಲಿತು ಪರಭಾಷಿಕರಿಗೆ ಪೈಪೋಟಿ ಒಡ್ಡುತ್ತಿದ್ದರೆ ಕನ್ನಡ ಕಲಿತ ಕನ್ನಡಿಗರು ಉದ್ಯೋಗ ಸಿಗದೇ ಪರಿತಪಿಸುವಂತಾಗಿದೆ. ನಮ್ಮ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಗಳಲ್ಲೂ ಪರಭಾಷಿಕರ ಹಾವಳಿ ಹೆಚ್ಚಾಗಿದೆ, ಈ ಕಂಪನಿಗಳೆಲ್ಲ ಒಂದೋ ನಮ್ಮ ಕನ್ನಡಿಗರು ಸ್ಥಾಪಿಸಿದವು ಇಲ್ಲವೆ, ಕನ್ನಡಿಗರು ನಿರ್ಮಿಸಿರುವ ಉದ್ಯಮಸ್ನೇಹೀ ವಾತಾವರಣದಿಂದಾಗಿ ಇಲ್ಲಿಗೆ ಬಂದಿರುವ ವಿದೇಶಿ, ದೇಶಿ ಕಂಪನಿಗಲ್ಲಿನ ಟೀಮ್ ಲೀಡರ್, ಪ್ರಾಜೆಕ್ಟ್ ಮೇನೇಜರ್ ಹುದ್ದೆಗಳಲ್ಲಿರುವವರೆಲ್ಲ ಪರಭಾಶಿಕರೆ . ಹೀಗೆ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತುಕೊಂಡಿರುವ ಇವರು ತಮ್ಮ ರಾಜ್ಯದವರನ್ನೇ ತಂದುತುಂಬಿಕೊಳ್ಳುತ್ತಿರುವುದರಿಂದ ಕನ್ನಡಿಗರಿಗೆ ಸಾಫ್ಟ್ ವೇರ್ ಕ್ಷೇತ್ರದಲ್ಲೂ ಅನ್ಯಾಯವಾಗುತ್ತಿದೆ, ಕಿರುಕುಳಕ್ಕೂ ಒಳಗಾಗುತ್ತಿದ್ದಾರೆ. ಇನ್ನು ಕನ್ನಡ ಸಿನಿಮಾ ಮಂದಿಯ ವಿಚಾರಕ್ಕೆ ಬರೋಣ. ಇವರಿಗೆ ಕನ್ನಡ ಭಾಷೆಯ ಅಸ್ತಿತ್ವ ಬೇಕು. ಆದರೆ ನಾಯಕಿ, ಸಂಗೀತ ನಿರ್ದೇಶಕರು, ಹಾಡುಗಾರರು ಪರಭಾಷೆಯವರೇ ಬೇಕು. ಹಿಗಿರಬೇಕಾದ್ರೆ ಹೇಗೆ ನಮ್ಮ ಸ್ವ ಭಾಷಾ ಉದಯೊನ್ಮುಖ ಕಲಾವಿದರಿಗೆ ಅವಕಾಶಗಳು ಸಿಗುತ್ತವೆ ನೀವೇ ಹೇಳಿ. ಇನ್ನು ಇಂಗ್ಲೀಷ್ ಇಲ್ಲದಿದ್ದರೆ ವಿವಿಧ ರಾಜ್ಯಗಳಲ್ಲಿ ಸಂವಹನ ಕಷ್ಟ. ಬಹುಭಾಷಾ ರಾಷ್ಟ್ರದಲ್ಲಿ ಇಂಗ್ಲೀಷ್ ಸಂಪರ್ಕ ಭಾಷೆಯಾಗಿರುವುದರಿಂದ ಯಾವ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕೆಂಬುದನ್ನು ಪೋಷಕರು ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂಗ್ಲೀಷ್ ಮೀಡಿಯಂ ಶಾಲೆಗಳಲ್ಲಿ ಶಿಕ್ಷಣ ಕೊಟ್ಟರೆ ಕನ್ನಡದ ಗತಿಯೇನು ಎನ್ನುವುದೇ ಈಗ ಭೂತಾಕಾರದ ಪ್ರಶ್ನೆಯಾಗಿ ಉಳಿದಿದೆ.
ಇನ್ನು ಹತ್ತಾರು ವರ್ಷಗಳಲ್ಲಿ ಕನ್ನಡವೆಲ್ಲಿದೆ ಎಂದು ದುರ್ಬೀನಿನಲ್ಲಿ ಹುಡುಕುವ ಪರಿಸ್ಥಿತಿ ಬರುವುದೇ? ಆಗ ಕನ್ನಡ ರಾಜ್ಯೋತ್ಸವ, ಕರ್ನಾಟಕ ರಾಜ್ಯ ಎನ್ನುವುದಕ್ಕೆ ಅರ್ಥವಿರುತ್ತದೆಯೇ? ಹೀಗಾಗದಿರಲು ಕನ್ನಡಿಗರು ಹಾಗು ಸರ್ಕಾರ ಏನು ಮಾಡಬೇಕು?. ಇವೆಲ್ಲವಕ್ಕೆ ಒಂದೇ ಉತ್ತರ ಕನ್ನಡಿಗರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಅಗ್ರಪ್ರಾಶಸ್ತ್ಯ ನೀಡುವುದು, ಖಾಸಗಿ ಉದ್ಯೋಗಗಳಲ್ಲಿ ಸ್ವಲ್ಪ ಭಾಗವಾದರೂ ಕನ್ನಡಿಗರಿಗೆ ಮೀಸಲಿಡುವಂತೆ ಸರ್ಕಾರದ ಆದೇಶ ಕಡ್ಡಾಯವಾಗಿ ಜಾರಿಗೆ ತರುವ ಮೂಲಕ ಕನ್ನಡಿಗರ ಹಿತರಕ್ಷಣೆ ಮಾಡುವ ಕೈಂಕರ್ಯವನ್ನು ಸರ್ಕಾರ ತೊಡಬೇಕು. ಖಾಸಗಿ ಉದ್ಯಮಗಳಲ್ಲೂ ಕನ್ನಡವನ್ನು ಸಂಪರ್ಕ ಭಾಷೆಯಾಗಿ ಬಳಸಲು ಆದಷ್ಟು ಒತ್ತಡ ಹೇರುವ ಮೂಲಕ ಕನ್ನಡವನ್ನು ಉಳಿಸಿ, ಬೆಳೆಸಲು ಪ್ರತಿಯೊಬ್ಬ ಕನ್ನಡಿಗ ಯತ್ನಿಸಬೇಕಾಗಿದೆ.
ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವದು..
ಸಿರಿಗನ್ನಡಂ ಗೆಲ್ಗೆ… ಜೈ ಕರ್ನಾಟಕ ಮಾತೆ..
ಕನ್ನಡ ರಾಜ್ಯೋತ್ಸವದ ಶುಭಾಶಯಗಳು..




